ಬ್ಯಾಬಿಲಾನ್
	ಪ್ರಾಚೀನ ಬ್ಯಾಬಿಲೋನಿಯಾದ ರಾಜಧಾನಿಯಾಗಿದ್ದು, ಈಗ ಪಾಳು ಬಿದ್ದಿರುವ ನಗರ, ಇರಾಕಿನಲ್ಲಿ ಬಾಗ್ದಾದ್ ನಗರದ ದಕ್ಷಿಣಕ್ಕೆ ಸುಮಾರು 88 ಕಿಮೀ ದೂರದಲ್ಲಿ ಯುಫ್ರೆಟೀಸ್ ನದಿಯ ಪೂರ್ವದಂಡೆಯಲ್ಲಿ ಇದರ ನೆಲೆ. ಸೆಮಿಟಿಕ್ ಸಂತತಿಯ ಎರಡನೆಯ ರಾಜ ಮನೆತನದ ಹಾಮ್ಮುರಾಬಿಯ ಕಾಲದಲ್ಲಿ ಕ್ರಿ.ಪೂ. 1792ರ ಸುಮಾರಿನಲ್ಲಿ ಈ ನಗರ ಪ್ರಾಮುಖ್ಯಗಳಿಸಿತು. ಹಿಟ್ಟೈಟರ ಧಾಳಿಗಳಲ್ಲಿ ಕ್ರಿ.ಪೂ. 1595ರಲ್ಲಿ ಇದು ಹಾಳಾಯಿತಾದರೂ ಮತ್ತೆ ಕ್ಯಾಸೈಟ್ ದೊರೆಗಳ ಕಾಲದಲ್ಲಿ ಪುನರುಜ್ಜೀವನಗೊಂಡು ಕ್ರಿ.ಪೂ. 1157ರ ತನಕವೂ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈಲಮ್ ಮತ್ತು ಅಸ್ಸಿರಿಯ ದೇಶಗಳ ಆಕ್ರಮಣಗಳಿಂದ ಕ್ಷೀಣವಾಗುತ್ತಿದ್ದರೂ ಪುನಃ ಕಾಲ್ಡಿಯನ್ ದೊರೆಗಳ ಆಶ್ರಯದಲ್ಲಿ ಕ್ರಿ.ಪೂ. 626-539ರ ಕಾಲದಲ್ಲಿ ಬಹಳ ಪ್ರಗತಿ ಪಡೆಯಿತು. ಕಾಲ್ಡಿಯನ್ ದೊರೆ 2ನೆಯ ನೆಬುಕಡ್ನೆಸರನ ಕಾಲದಲ್ಲಿ ಅಸ್ಸಿರಿಯನ್ನರ ಸತ್ತ್ವಭಂಗವಾಯಿತು. ಅನಂತರ ಕ್ರಿ.ಪೂ. 539ರಲ್ಲಿ ಇದು ಪರ್ಷಿಯನ್ ಚಕ್ರವರ್ತಿ ಸೈರಸನ ವಶವಾಯಿತು. ಅನಂತರ ಗ್ರೀಕರ ಮತ್ತು ರೋಮನರ ಅಧೀನಕ್ಕೆ ಬಂದು ಕ್ರಿಸಶಕಾರಂಭದ ತನಕವೂ ಅಸ್ತಿತ್ವ ಉಳಿಸಿಕೊಂಡಿತ್ತು. ಇತಿಹಾಸ ಪ್ರಸಿದ್ಧ ವ್ಯಕ್ತಿಗಳಲ್ಲೊಬ್ಬನಾದ ಅಲೆಕ್ಸಾಂಡರ್ ಭಾರತದ ಮೇಲೆ ಆಕ್ರಮಣ ನಡೆಸಿ ಹಿಂದಿರುಗುತ್ತಿದ್ದಾಗ ಕ್ರಿ.ಪೂ. 323ರಲ್ಲಿ ಇಲ್ಲಿ ತೀರಿಕೊಂಡ.

	ಇತಿಹಾಸ, ಐತಿಹ್ಯ ಮತ್ತು ಸಾಹಿತ್ಯಗಳ ದೃಷ್ಟಿಯಿಂದ ಪುರಾತನ ನಾಗರಿಕತೆಗಳಲ್ಲಿ ಬೇರೆ ಯಾವ ನಗರಕ್ಕೂ ಇಲ್ಲದ ಪ್ರಸಿದ್ಧಿ ಪಡೆದಿದ್ದ ಈ ನಗರ ಈಗ ಮಾತ್ರ ಪಾಳುಬಿದ್ದಿದೆ. ಕಟ್ಟಡ ಶಿಲೆಗಳು ದೊರಕದ, ಮೆಕ್ಕಲುಮಣ್ಣಿನ ಈ ಪ್ರದೇಶದಲ್ಲಿ ಈ ನಗರದ ನಿರ್ಮಾಣಕ್ಕೆ ಹೇರಳವಾಗಿ ಬಳಸಿದ್ದ ಸುಟ್ಟ ಇಟ್ಟಿಗೆಗಳನ್ನು ಈಚಿನ ನಿವಾಸಿಗಳು ದೋಚಿ ಹೊಸ ಗೃಹಗಳನ್ನು ನಿರ್ಮಿಸಿರುವುದರಿಂದ ಈ ನಗರದ ನಿವೇಶನ ಹಾಳಾಗಿದೆ. ಇದರ ಬಳಿ ಇರುವ ಆಧುನಿಕ ಇಲ್ಲ ಪಟ್ಟಣದ ಮನೆಗಳ ನಿರ್ಮಾಣಕ್ಕೆ ಬ್ಯಾಬಿಲಾನಿನ ಇಟ್ಟಿಗೆಗಳನ್ನು ಬಳಸಿರುವುದನ್ನು ಕಾಣಬಹುದು. ಇಲ್ಲಿನ ಪಾಳುನಿವೇಶನದಲ್ಲಿ ಬ್ಯಾಬಿಲ್ ಎಂಬ ಐದಾರು ದಿಬ್ಬಗಳಲ್ಲಿ ಪ್ರಾಚೀನ ಕಟ್ಟಡಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಈ ನಗರದ ಹೆಸರು ಸುಮೇರಿಯನ್ ಭಾಷೆಯಲ್ಲಿ ಕೆಡಿಂಗಿರಾ ಎಂದೂ ಸೆಮಿಟಿಕ್ ಭಾಷೆಯಲ್ಲಿ ಬ್ಯಾಬಿಲಿ ಎಂದೂ ಇತ್ತು. ಈ ಪದಗಳಿಗೆ ದೇವರ ಹೆಬ್ಬಾಗಿಲು ಎಂಬ ಅರ್ಥವಿದೆ.

	ಇಲ್ಲಿ ಕ್ರಿ.ಶ. 1899-1917ರ ನಡುವೆ ಜರ್ಮನರು ಕೋಲ್ಡುವೈ ಎಂಬ ವಿದ್ವಾಂಸನ ನೇತೃತ್ವದಲ್ಲಿ ಉತ್ಖನನ ನಡೆಸಿದಾಗ ನಗರದ ವಿನ್ಯಾಸವನ್ನೂ ಪ್ರಮುಖ ಕಟ್ಟಡವಾದ ಜಿಗ್ಗುರಾಟ್, ನಗರದ ಆರಾಧ್ಯ ದೇವತೆ ಮಾರ್ಡುಕನ್ ಮಂದಿರ, ಅರಮನೆಗಳು ಮತ್ತು ಕೋಟೆ ಇವುಗಳ ಅವಶೇಷಗಳನ್ನೂ ಗುರುತಿಸಲಾಯಿತು.

	ಉತ್ಖನನಗಳಲ್ಲಿ ಅನೇಕ ಲಿಖಿತ ಜೇಡಿಮಣ್ಣಿನ ಫಲಕಗಳು ದೊರಕಿವೆ. ಕ್ಯೂನಿಫಾರಮ್ ಲಿಪಿಯಲ್ಲಿ ಸೆಮಿಟಿಕ್ ಭಾಷೆಯಲ್ಲಿ ಬರೆದ ಈ ಸಾಹಿತ್ಯಕ ದಾಖಲೆಗಳಿಂದ ಈ ನಗರದ ಪ್ರಾಚೀನ ಇತಿಹಾಸವನ್ನು ಕುರಿತ ಅನೇಕ ಮಾಹಿತಿಗಳು ದೊರಕುತ್ತವೆ. ಗ್ರೀಕ್ ಇತಿಹಾಸಕಾರ ಹಿರೊಡೊಟಸ್ ಈ ನಗರದ ಮತ್ತು ಇದರ ಸುತ್ತಲಿನ ಬೃಹತ್ತಾದ ಕೋಟೆಗೋಡೆಗಳ ವರ್ಣನೆ ನೀಡಿದ್ದಾನೆ. ನದಿ ದಾಟಿ ಕೋಟೆ ಪ್ರವೇಶಿಸಲು ಮರದ ಸೇತುವೆ ನಿರ್ಮಿಸಲಾಗಿತ್ತೆಂದೂ ಶತ್ರುಗಳ ಆಕ್ರಮಣದ ಭೀತಿಯಿದ್ದಾಗ ಅದನ್ನು ಕೋಟೆಯೊಳಕ್ಕೆ ಮಡಿಸಿಕೊಳ್ಳುವ ವ್ಯವಸ್ಥೆಯಿತ್ತೆಂದೂ ಹಿರೊಡೊಟಸ್ ತಿಳಿಸಿದ್ದಾನೆ. ವಿಶಾಲವಾದ ಕೋಟೆಗೋಡೆಯ ಮೇಲೆ ನಾಲ್ಕು ಕುದುರೆಗಳ ರಥ ಸಾಗಲು ಸಾಕಾಗುವಷ್ಟು ಅಗಲವಾದ ರಸ್ತೆಯಿತ್ತೆಂದೂ ಹೇಳಿದ್ದಾನೆ. ರಸ್ತೆಯ ಎರಡು ಬದಿಗಳಲ್ಲೂ ತಿರುಗುಗೋಪುರಗಳಿದ್ದುವು. ಈ ಕೋಟೆಯೊಳಗೆ ಹೋಗಲು ವಿವಿಧ ದೇವತೆಗಳ ಹೆಸರಿನ ಅನೇಕ ಮಹಾದ್ವಾರಗಳಿದ್ದುವು. ಇವುಗಳ ಪೈಕಿ ಅತ್ಯಂತ ಸುಂದರವಾಗಿದ್ದು ಹೆಚ್ಚು ಸುಸ್ಥಿತಿಯಲ್ಲಿ ಉಳಿದು ಬಂದಿರುವುದು ಇಷ್ಟಾರ್ ಮಹಾದ್ವಾರ. ನಗರದ ಮುಖ್ಯ ರಸ್ತೆಯಾದ ಮೆರವಣಿಗೆ ಮಾರ್ಗಕ್ಕೆ ಇದೇ ಹೆಬ್ಬಾಗಿಲು. ಈ ದ್ವಾರಕ್ಕೆ ಎತ್ತರಕಮಾನಿತ್ತು. ದ್ವಾರದ ಒಳಪಾಶ್ರ್ವ ಮತ್ತು ಮುಂದಿನ ಗೋಡೆಗಳ ಮೇಲೆ ಬಣ್ಣದ ಫಲಕಗಳಲ್ಲಿ ಮಾಡಿದ ವೃಷಭಗಳ, ಸಿಂಹಗಳ ಮತ್ತು ಪುರಾಣದ ಭಯಂಕರ ಪ್ರಾಣಿಗಳ ಶಿಲ್ಪಗಳಿದ್ದುವು.

	ಈ ಮಹಾನಗರದ ಅತ್ಯಂತ ಪ್ರಸಿದ್ಧವೂ ಪುರಾತನವೂ ಆದ ಕಟ್ಟಡವೆಂದರೆ ಬ್ಯಾಬಿಲ್ ಗೋಪುರ. ಸ್ವರ್ಗ ಮತ್ತು ಭೂಮಿಗಳ ಪ್ರತಿಷ್ಠಾಪನ ಮಂದಿರವೆಂದೂ ಹೆಸರಿದ್ದ ಈ ಗೋಪುರವನ್ನು ಯುಫ್ರೇಟೀಸ್ ಸೇತುವೆಗೆ ಹೋಗುವ ರಸ್ತೆಯ ಉತ್ತರಭಾಗದಲ್ಲಿ ವಿಶಾಲ ಪ್ರಾಂಗಣದ ಮಧ್ಯೆ ನಿರ್ಮಿಸಲಾಗಿತ್ತು. ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ, ಕ್ರಮೇಣ ಕಿರಿದಾಗುವ, ಹಂತ ಹಂತವಾಗಿ ಮೇಲಕ್ಕೇರುವ, ಆಯಾಕಾರದ ಜಗಲಿಗಳ ರೂಪದ ಕೃತಕ ದಿಬ್ಬದ ಮೇಲೆ ಹೊಳೆಯುವ ನೀಲಿ ಬಣ್ಣದ ಗಾಜು ಲೇಪದ ಇಟ್ಟಿಗೆಗಳಿಂದ ಕಟ್ಟಿದ ಮಂದಿರವಿತ್ತು. ಮಂದಿರದಲ್ಲಿ ಮಂಚವೂ ಚಿನ್ನದ ಕಾಲುಮಣೆಯೂ ಇದ್ದುವು. ಮಂಚದ ಮೇಲೆ ನಗರದೇವ ಮಾರ್ಡುಕನ ಆರಾಧೆಕಳಾದ ಪುರೋಹಿತಗಿತ್ತಿ ಮಲಗುತ್ತದ್ದಳೆಂದೂ ಆಕೆಯೊಡನೆ ದಿವ್ಯವಿವಾಹದ ಮೂಲಕ ಮಾರ್ಡುಕ್ ರಮಿಸುತ್ತಿದ್ದನೆಂದೂ ನಂಬಲಾಗಿತ್ತು. ಇಂಥ ಕೃತಕ ದಿಬ್ಬದ ಮೇಲಿನ ಮಂದಿರಗಳನ್ನು ಜಿಗ್ಗುರಾಟ್ ಎಂದು ಕರೆಯಲಾಗಿತ್ತು ರಸ್ತೆಯ ಇನ್ನೊಂದು ಬದಿಯಲ್ಲಿ ಅನೇಕ ಗುಡಿಗಳ ಪ್ರಾಂಗಣಗಳಿಂದ ಕೂಡಿದ ಮಾರ್ಡುಕನ ಎಸಾಗಿಲಾ ಮಂದಿರವಿತ್ತು. ಆ ಮಂದಿರದ ಮುಖ್ಯದೇವತೆ ಆಸೀನ ಜû್ಯೂಸ್. ಅಲ್ಲಿ 48,000 ಪೌಂಡು ತೂಕದ ಚಿನ್ನದ ಸಿಂಹಾಸನ ಮತ್ತು ಕಾಲುಮಣೆಗಳಿದ್ದುವು ಎಂದು ಹಿರೊಡೊಟಸ್ ತಿಳಿಸಿದ್ದಾನೆ. ಮಂದಿರದ ಹೊರಭಾಗದಲ್ಲಿದ್ದ ವಿಶಾಲವಾದ ಬಲಿಪೀಠಗಳ ಬಳಿ ಸುಮಾರು 6 ಮೀ ಎತ್ತರದ ಘನವಾದ ಪ್ರತಿಮೆಯಿತ್ತು.

	ಪ್ರಪಂಚದ ಏಳು ಅದ್ಭುತಗಳಲ್ಲೊಂದಾದ ತೂಗು ಉದ್ಯಾನ ಬ್ಯಾಬಿಲಾನಿನ ಮಹತ್ತರ ನಿರ್ಮಾಣ. ಪರ್ವತ ಪ್ರದೇಶದಲ್ಲಿ ಹುಟ್ಟಿ ಬೆಳೆದ ತನ್ನ ಪತ್ನಿಗೆ ಅಲ್ಲಿಯಂಥಯೇ ಪ್ರಕೃತಿ ಸೌಂದರ್ಯವನ್ನು ಒದಗಿಸಲು ಚಕ್ರವರ್ತಿ ನೆಬುಕಡ್ನೆಸರ್ ಜಿಗ್ಗುರಾಟ್ ದಿಬ್ಬದ ಹಂತಹಂತವಾದ ಮೇಲ್ಮೈಯಲ್ಲಿ ಬಗೆಬಗೆಯ ಫಲಪುಷ್ಟಗಳ ಗಿಡಮರಗಳನ್ನು ಬೆಳೆಸಿದ್ದನೆಂದೂ ಅವನ್ನು ತೂಗುವ ಉದ್ಯಾನಗಳೆಂದು ಹಿರೊಡೊಟಸ್ ವರ್ಣಿಸಿದ್ದನೆಂದೂ ನಂಬಲಾಗಿದೆ.
(ಬಿ.ಕೆ.ಜಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ